ಕರ್ನಾಟಕ ಸರ್ಕಾರ

(ಇ-ಆಡಳಿತ ಕೇಂದ್ರ)

ಇ-ಕಲಿಕಾ ಅಕಾಡೆಮಿ ಪೋರ್ಟಲ್

ಇ-ಕಲಿಕಾ ಕನ್ನಡ ಅಕಾಡೆಮಿಯು "ಅಂತರ್ಜಾಲದ ಮೂಲಕ ಕನ್ನಡ ಕಲಿಯಬಹುದಾದ" ವೇದಿಕೆಯಾಗಿದೆ. ಕನ್ನಡ ಭಾಷೆಯನ್ನು ಮಾತನಾಡುವವರು ಇಂದು ಜಗತ್ತಿನಾದ್ಯಂತ ಹಂಚಿಹೋಗಿದ್ದಾರೆ. ತಮ್ಮ ಮಾತೃಭೂಮಿಯಿಂದ ದೂರವಿರುವ ಎರಡನೇ ತಲೆಮಾರಿನ ಕನ್ನಡಿಗರಿಗೆ ಕನ್ನಡ ಭಾಷೆಯನ್ನು ಕಲಿಯಲು ಆಸಕ್ತಿ ಇದೆ. ಜಗತ್ತಿನ ಬೇರೆ ಬೇರೆ ಭಾಗಗಳಿಂದ ಉದ್ಯೋಗ, ವ್ಯವಹಾರದ ಉದ್ದೇಶದಿಂದ ಇಲ್ಲಿ ನೆಲೆಸಿರುವವರಿಗೆ ಕನ್ನಡ ಕಲಿಯಲು ಉತ್ಸಾಹ ಇದೆ. ಹಲವರಿಗೆ ಕನ್ನಡ ಭಾಷೆಯಲ್ಲಿ ಹೆಚ್ಚಿನ ಜ್ಞಾನ ಪಡೆಯಲು ಇಚ್ಛೆ ಇರುತ್ತದೆ. ಇನ್ನೂ ಕೆಲವರಿಗೆ ಕನ್ನಡ ಭಾಷೆಯ ಮೂಲಕ ಬೇರೆ ವಿಷಯಗಳನ್ನು ಕಲಿಯಲು ಆಸಕ್ತಿಯೂ ಇದೆ. ಈಗಿನ ಪರಿಸ್ಥಿತಿಯಲ್ಲಿ ಸಮಯ ಮತ್ತು ಸೌಲಭ್ಯದ ಕೊರತೆಯಿಂದಾಗಿ ಸಾಂಪ್ರದಾಯಿಕ ತರಗತಿಗಳಲ್ಲಿ ಕುಳಿತು ಅಭ್ಯಸಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲಾ ಆಸಕ್ತರಿಗೆ ಕನ್ನಡ ಕಲಿಕೆಗೆ ವೇದಿಕೆ ನಿರ್ಮಾಣ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಇ- ಕಲಿಕಾ ಕನ್ನಡ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ.
ಮುಂದುವರೆದು, ಇ- ಕಲಿಕಾ ಕನ್ನಡ ಅಕಾಡೆಮಿಯು ಹಲವು ವಿಭಾಗ, ಹಂತಗಳಲ್ಲಿ ಶಿಕ್ಷಣದ ಕೆಲಸಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತದೆ. ಅಂತರ್ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಅಗತ್ಯ ಮತ್ತು ಆಸಕ್ತಿ ಇರುವ ಕನ್ನಡಿಗರಿಗೆ ಹಾಗೂ ಕನ್ನಡೇತರರಿಗೆ, ಶಿಕ್ಷಕರಿಗೆ ಮತ್ತು ಜನಸಾಮಾನ್ಯರಿಗೆ ಕನ್ನಡ ಭಾಷೆಯನ್ನು ಕಲಿಸುವ ಮತ್ತು ಕನ್ನಡ ಭಾಷೆಯ ಜ್ಞಾನವನ್ನು ಹೆಚ್ಚಿಸುವುದು ಮತ್ತು ಕನ್ನಡ ಭಾಷೆಯ ಮೂಲಕ ಭೌತ ವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ವಾಣಿಜ್ಯ-ವ್ಯವಹಾರ, ಮಾಹಿತಿ-ತಂತ್ರಜ್ಞಾನಗಳನ್ನು ಕಲಿಸುವುದು "ಇ-ಕಲಿಕಾ ಕನ್ನಡ ಅಕಾಡೆಮಿಯ ಉದ್ದೇಶ ಮತ್ತು ವ್ಯಾಪ್ತಿಯಾಗಿದೆ.


×
CEG_LOGO